ಶ್ರೀನಿವಾಸ ಅಯ್ಯರ್, ಸೆಮ್ಮಂಗುಡಿ ರಾಧಾಕೃಷ್ಣನ್
	1908-2003. ಕರ್ಣಾಟಕಸಂಗೀತದ ವಿವಿಧ ಸ್ತರಗಳಲ್ಲಿ ಮೂಲಭೂತ ಅಧ್ಯಯನ, ಅಧ್ಯಾಪನ, ಸಂಶೋಧನೆ ಮತ್ತು ಎಲ್ಲಕ್ಕೂ ಮಿಗಿಲಾಗಿ ವೇದಿಕೆಗಾಯನದ ಮೂಲಕ ಅದರ ಎತ್ತರ ಬಿತ್ತರಗಳನ್ನು ವಿಸ್ತರಿಸಿದ  ಅಪೂರ್ವ ಕಲಾವಿದ. ಸಂಗೀತ ವಿಮರ್ಶಕರ ನುಡಿಗಳಲ್ಲಿ ಇವರು ಆಧುನಿಕ ಸಂಗೀತ ತ್ರಿಮೂರ್ತಿಗಳ ಪೈಕಿ ಒಬ್ಬರು. ಇನ್ನಿಬ್ಬರು ಅರಿಯಕುಡಿ ರಾಮಾನುಜ ಅಯ್ಯಂಗಾರ್ (1890-1967) ಮತ್ತು ಎಮ್.ಎಸ್. ಸುಬ್ಬುಲಕ್ಷ್ಮಿ (1916-2004). ಕರ್ಣಾಟಕಸಂಗೀತವನ್ನು ಅವಿಚ್ಛಿನ್ನವಾಗಿ 76 ವರ್ಷ ಕಾಲ ಹಾಡುತ್ತ ಬಂದ ಈ ಮಹಾ ಗಾಯಕ-ಸಾಧಕರನ್ನು ಸಮಕಾಲೀನ ವೃತ್ತ ಪತ್ರಿಕೆಗಳು “ಸಂಗೀತ ಭೀಷ್ಮ” ಎಂದು ಅರ್ಥಪೂರ್ಣವಾಗಿ ವರ್ಣಿಸಿವೆ. 

	ತಿರುಕ್ಕೋಡಿಕ್ಕಾವಲಿನಲ್ಲಿ ಮಾವ ಕೃಷ್ಣ ಅಯ್ಯರ್ ಮನೆಯಲ್ಲಿ 1908 ಜುಲೈ 28 ರಂದು ಜನಿಸಿದರು. ಇವರು ಚೀನು ಎಂಬ ಆತ್ಮೀಯ ಹೆಸರಿನಿಂದ ಜನಪ್ರಿಯರು. ಆ ಕಾಲಕ್ಕೆ ಪಾಶ್ಚಾತ್ಯವಾದ್ಯ ಎನಿಸಿಕೊಂಡಿದ್ದ ಪಿಟೀಲನ್ನು ಕರ್ಣಾಟಕಸಂಗೀತಕ್ಕೆ ಅದ್ಭುತವಾಗಿ ಬಳಸಿಕೊಂಡ ಖ್ಯಾತಿ ಕೃಷ್ಣ ಅಯ್ಯರರಿಗಿತ್ತು. ಇಂಥ ಸಂಗೀತ ಪರಿಸರದಲ್ಲಿ ಇವರು ಬೆಳೆದರು.  ಆಗ ಅಲ್ಲಿ ಶಾಲೆಗಳೇ ಇರಲಿಲ್ಲವಾದ ಕಾರಣ ಇವರು ಎಂಟನೆಯ ವಯಸ್ಸಿನಲ್ಲಿ ಸಂಗೀತಾಧ್ಯಯನ ಆರಂಭಿಸಿದರು. ಸೋದರ ಸಂಬಂಧಿ ಸೆಮ್ಮಂಗುಡಿ ಶ್ರೀನಾರಾಯಣಸ್ವಾಮಿ ಅಯ್ಯರ್ ಇವರ ಮೊದಲ ಗುರು. ತಂದೆ ರಾಧಾಕೃಷ್ಣನ್ ದೇವಸ್ಥಾನಗಳಲ್ಲಿ ಅಷ್ಟಪದಿಗಳನ್ನು ಹಾಡುವ ನಿತ್ಯ ಕೈಂಕರ್ಯ ಒಪ್ಪಿಸುತ್ತಿದ್ದರು. ಹೀಗಾಗಿ ಮಗ ಹಾಡುಗಾರನಾಗಲಿ ಎಂಬುದೇ ಅವರ ಆಸೆ. ಆದ್ದರಿಂದ 1918-21 ಅವಧಿಯಲ್ಲಿ ಇವರಿಗೆ ತಿರುವಿಡೈಮರುದೂರಿನ ಗೋಟ್ಟು ವಾದ್ಯಮ್ ಸಖಾರಾಮರಾವ್ ಅವರಲ್ಲಿ ಗುರುಕುಲರೀತ್ಯ ಹಾಡುಗಾರಿಕೆ ಅಭ್ಯಾಸ ದೊರೆಯಿತು. ಜೊತೆಗೆ ದೇವಕೋಟೈ ನಾರಾಯಣ ಅಯ್ಯಂಗಾರ್ ಹಾಗೂ ಮರುದುವಾಕ್ಕುಡಿ ಸುಂದರಮ್ ಅಯ್ಯರ್ ಅವರುಗಳ ಸಹಪಾಠ್ಯ. 

	ಸಂತ ತುಕಾರಾಮ್ ಅವರನ್ನು ನೆನಪಿಸುವಂತಿದ್ದ ಸಖಾರಾಮರಾಯರಲ್ಲಿ ಇವರಿಗೆ ನಿತ್ಯ ಕಠಿಣಶ್ರಮದ ಸಾಧನೆ. ಇದು ಇವರ ಶಾರೀರ ಹರಿತಗೊಳ್ಳುವುದಕ್ಕೂ ಕಂಚಿನಂತೆ ಮಿಂಚಿ ಝೇಂಕರಿಸುವುದಕ್ಕೂ ಕಾರಣವಾಯಿತು. ಈ ಸಮಯದಲ್ಲೇ ಕುಂಭಕೋಣಮ್‍ನಲ್ಲಿದ್ದ ದಕ್ಷಿಣಾ ಮೂರ್ತಿ ಪಿಳ್ಳೈ ಅವರಿಂದ ಪಿಟೀಲು ಕಲಿಯಲು ಆಗ್ರಹ ಬಂದು ಇವರ ತಾಳಜ್ಞಾನ ಖಚಿತ ಗೊಳ್ಳಲು ಸಾಧ್ಯವಾಯಿತು. ಅನಂತರ ಕೆಲಕಾಲ ಮಹಾ ರಾಜಪುರಮ್ ವಿಶ್ವನಾಥ  ಅಯ್ಯರ್ ಅವರಲ್ಲಿಯೂ ವಿದ್ವತ್ಪೂರ್ಣ ಕಲಿಕೆಯ ಅವಕಾಶ ದೊರೆತು ಇವರ ಸಂಗೀತಜ್ಞಾನ ವಿಸ್ತಾರ ಗೊಂಡಿತು. ಇವರ ಪ್ರತಿಭೆ, ಪ್ರೌಢಿಮೆಗಳು ಮೊತ್ತ ಮೊದಲ ಬಾರಿಗೆ ವೇದಿಕೆ ಯಲ್ಲಿ ಪ್ರಕಟಗೊಂಡದ್ದು ಹದಿನೆಂಟರ ಹರೆಯದಲ್ಲಿ (1926), ಕುಂಭಕೋಣಮ್‍ನ ನಾಗೇಶ್ವರಸ್ವಾಮಿ ಕೋಯಿಲ್ ಆವರಣದಲ್ಲಿ. ಆಗಷ್ಟೇ ಪ್ರಾರಂಭಗೊಂಡಿದ್ದ ಮದರಾಸು ಮ್ಯೂಸಿಕ್ ಅಕಾಡೆಮಿಯಲ್ಲಿ ತಮ್ಮ ಭಾವ ರಾಗ ನೈಪುಣ್ಯ ಪ್ರದರ್ಶಿಸುವ ಸುಯೋಗ ದೊರೆತು ಚಂಬೈ, ಅರಿಕುಡಿ, ದ್ವಾರಮ್ ಅವರುಗಳ ಪ್ರಶಂಸೆಗೆ ಪಾತ್ರರಾದ ಇವರು ಸೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಎಂಬ ಪೂರ್ಣನಾಮಧೇಯ ದಿಂದ ವಿದ್ವತ್‍ಪ್ರಪಂಚದಲ್ಲಿ ಹೆಸರುವಾಸಿಯಾದರು (1927). 

	ಇವರ ಪ್ರತಿಭೆಯ ಮತ್ತೊಂದು ಮಹತ್ತ್ವಪೂರ್ಣ ತಿರುವಿಗೂ ಈ ಕಛೇರಿ ಕಾರಣವಾಯಿತು. ಹರಿಕೇಶನಲ್ಲೂರು ಮುತ್ತಯ್ಯ ಭಾಗವತರು (1877-1945) ಈ ಯುವ ಕಲಾವಿದನ ಹಿರಿಮೆ ಕೇಳಿ ಇವರನ್ನು ಸ್ವಾತಿ ತಿರುನಾಳರ ಕೃತಿ ಪ್ರಕಟಣ ಯೋಜನೆಯ ಪ್ರಧಾನ ಸಂಪಾದಕರಾಗಿ ಆಹ್ವಾನಿಸುವಂತೆ ತಿರುವಾಂಕೂರು ಸಂಸ್ಥಾನದ ಆಡಳಿತ ಮಂಡಳಿಗೆ ಶಿಫಾರಸು ಮಾಡಿದರು. ಇವು ಮೂರು ಸಂಪುಟಗಳಲ್ಲಿ ಹೊರಬಂದುವು (1941). ಇವರ ನಿಖರ ವಿಮರ್ಶನ ನೈಪುಣ್ಯವನ್ನೂ ಆಯ್ಕೆ ಪ್ರಕ್ರಿಯೆಯಲ್ಲಿಯ ನಿರ್ದುಷ್ಟತೆಯನ್ನೂ ಇವು ಸಾರಸ್ವತಪ್ರಪಂಚಕ್ಕೆ ಪರಿಚಯಿಸಿದುವು. ಅದೇ ವರ್ಷ ಇವರು ತಿರುವನಂತಪುರದ ಸ್ವಾತಿ ತಿರುನಾಳ್ ಸಂಗೀತ ಕಾಲೇಜಿನ ಪ್ರಾಂಶುಪಾಲರಾಗಲು ಈ ಘಟನೆ ಕಾರಣವಾಯಿತು. 1963ರ ತನಕ ಅಂದರೆ ಸು. 22 ವರ್ಷಗಳಷ್ಟು ದೀರ್ಘಕಾಲ ಈ ಸ್ಥಾನಕ್ಕೆ ಇವರು ಘನತೆ ತಂದರು. ಇದು ಇವರ ಆಡಳಿತ ನೈಪುಣ್ಯಕ್ಕೆ ಮತ್ತು ಕಲಾಪ್ರಪಂಚದಲ್ಲಿ ಇವರು ಸ್ಥಾಪಿಸಿಕೊಂಡಿದ್ದ ಅಖಂಡ ಜ್ಞಾನನಿಷ್ಕøಷ್ಟತೆಗೆ ಸಂದ ಗೌರವ. 

	ಇವರನ್ನು ರಸಿಕ ಶ್ರೋತೃಗಳು ಅನೇಕವೇಳೆ  ಪಟ್ಟಿವಿಡುವರಾದು ಸೆಮ್ಮಂಗುಡಿ, ಮಾರುಬಲ್ಕ ಸೆಮ್ಮಂಗುಡಿ ಎಂದು ಕೀರ್ತನೆಗಳ ಮುಖೇನ ಗುರುತಿಸುತ್ತಿದ್ದರು. ತ್ಯಾಗರಾಜರ ಈ ಕೃತಿಗಳು ಕ್ರಮವಾಗಿ ಮಂಜರಿ ಮತ್ತು ಶ್ರೀರಂಜಿನಿ ರಾಗಗಳಲ್ಲಿವೆ. ಕೇರಳದ ವೈದ್ಯರೊಬ್ಬರು ಇವರನ್ನು ರೀತಿಗೌಳ ಎಂದೇ ಕರೆಯುತ್ತಿದ್ದರೆಂದು ತಿಳಿದುಬರುತ್ತದೆ. ಮದರಾಸಿನ ಕೃಷ್ಣಗಾನಸಭಾಗಾಗಿ ಇವರು ಹಾಡಿದ ತೋಡಿ ರಾಗದ ಶ್ರೀಕೃಷ್ಣಂ ಭಜಮಾನಸ ಸತತಂ (ಮುತ್ತುಸ್ವಾಮಿ ದೀಕ್ಷಿತರು) ಕೃತಿ, ಮುಖಾರಿರಾಗದ ಕ್ಷೀಣಮೈ (ತ್ಯಾಗರಾಜ), ಭೈರವಿಯ ಅಂಬಾ ಕಾಮಾಕ್ಷಿ (ಶ್ಯಾಮಶಾಸ್ತ್ರೀ), ನಾಯಕಿ ರಾಗದ ರಂಗನಾಯಕಂ (ದೀಕ್ಷಿತರು), ಆನಂದಭೈರವಿಯ ತ್ಯಾಗರಾಜಯೋಗವೈಭವಂ (ದೀಕ್ಷಿತರು), ರೀತಿಗೌಳದ ಜನನಿ ನಿನ್ನುವಿನಾ (ಸುಬ್ಬರಾಯಶಾಸ್ತ್ರೀ) ಕೃತಿಗಳು ಅನಂತರದ ಎಲ್ಲ ಸಭೆಗಳಲ್ಲಿ ಖ್ಯಾತವಾದುವು. ಶಾಸ್ತ್ರೀಯ ಮಟ್ಟಿನ  ನಿಷ್ಕøಷ್ಟತೆ ಹಾಗೂ ರಾಗಚ್ಛಾಯೆಯ ನಿಖರ ಪ್ರದರ್ಶನ ಈ ಕೃತಿಗಳ ಯಶಸ್ಸಿಗೆ ಕಾರಣ. ಇವರ ಪ್ರಸಿದ್ಧ ಶಿಷ್ಯರ ಸಾಲಿನಲ್ಲಿ ಮುಖ್ಯವಾಗಿ ಎಮ್.ಎಸ್.ಸುಬ್ಬುಲಕ್ಷ್ಮಿ, ಟಿ.ಎನ್.ಕೃಷ್ಣನ್, ಟಿ.ಎಮ್.ತ್ಯಾಗರಾಜನ್, ಪಿ.ಎಸ್.ನಾರಾಯಣಸ್ವಾಮಿ, ವಿ.ಸುಬ್ರಮಣಿಯಮ್ ಮೊದಲಾದವರಿದ್ದಾರೆ. 

	ಗುರು ಮಹಾರಾಜಪುರಮ್ ಅವರಿಗೆ ಸಂದ ಸಂಗೀತ ಕಲಾನಿಧಿ ಗೌರವ ಪ್ರಶಸ್ತಿಯೇ ಮುಂದೆ ಇವರಿಗೂ ಸಂದಿತು. ಇದಲ್ಲದೆ ಪದ್ಮಭೂಷಣ, ಪದ್ಮವಿಭೂಷಣ, ಇಸೈ ಪೆರಿಜ್ಞರ್, ಕಾಳಿದಾಸ ಸಮ್ಮಾನ್ ಮುಂತಾದ ರಾಷ್ಟ್ರೀಯ ಪ್ರಶಸ್ತಿ ಗೌರವಗಳೂ ಇವರಿಗೆ ಲಭ್ಯವಾಗಿವೆ. 

	ಇವರು ಹಾಸ್ಯಪ್ರಜ್ಞೆಗೂ ಖ್ಯಾತರು. ಒಂದು ಸಂದರ್ಭದಲ್ಲಿ ಇವರು ಗುರು ಮಹಾರಾಜಪುರಮ್ ಅವರೊಂದಿಗೆ ಪಯಣಿಸುತ್ತಿದ್ದಾಗ, “ತಂಬೂರಿ ನನ್ನ ತೊಡೆಮೇಲೆ, ಗುರುಗಳ ಸ್ಟೀಲ್ ಟ್ರಂಕು ಜೊತೆಗೆ, ಬೆಳ್ಳಿಯ ಎಲೆಅಡಿಕೆ ಡಬ್ಬಿ ಹಾಗೂ ನೀರಿನ ಹೂಜಿ ಹಗ್ಗದೊಂದಿಗೆ ನನ್ನ ಕತ್ತಿನಲ್ಲಿ ನೇತಾಡುತ್ತಿದ್ದುವು. ನಾನು ಹೇಗಿದ್ದೆನೆಂಬುದನ್ನು ಊಹಿಸಿಕೊಳ್ಳಿ. ನನ್ನ ಮೈಮೇಲಿದ್ದ ಇವೆಲ್ಲ ರೈಲು ವೇಗ ಪಡೆದಷ್ಟು ವೇಗವಾಗಿ ತೂಗಾಡುತ್ತಿದ್ದುವು. ನನ್ನ ಗುರು ಎಚ್ಚರದಲ್ಲಿದ್ದಾಗ ನನಗೆ ನಿದ್ದೆಯಿಲ್ಲ. ಅವರು ನಿದ್ದೆ ಮಾಡುವಾಗ ನನಗೆ ನಿದ್ದೆ ಮಾಡಲು ಸಾಧ್ಯವಿರಲಿಲ್ಲ!” 

	ಇವರು 2003 ಅಕ್ಟೋಬರ್ 31ರಂದು ನಿಧನರಾದರು. ನಿಧನಾನಂತರ ತಮ್ಮ ಕಣ್ಣುಗಳನ್ನು ಚೆನ್ನೈನ ಶಂಕರ ನೇತ್ರಾಲಯಕ್ಕೆ ದಾನಮಾಡುವಂತೆ ವಿನಂತಿಸಿದ್ದರು.						
(ಜಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ